ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಅಬ್ಬರ: ಹೊಸನಗರ, ತೀರ್ಥಹಳ್ಳಿ ತಾಲೂಕಿನ ಶಾಲಾ-ಕಾಲೇಜುಗಳಿಗೆ ಜುಲೈ 8ರಂದೂ ರಜೆ ಘೋಷಣೆ
ಶಿವಮೊಗ್ಗ: ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕಿನ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ಜುಲೈ 8, 2026 (ಬುಧವಾರ) ರಜೆ ಘೋಷಿಸಲಾಗಿದೆ.
ಹೊಸನಗರ ತಾಲೂಕಿನಾದ್ಯಂತ ಭಾರೀ ಮಳೆ ಹಾಗೂ ಶೀತ ಗಾಳಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿ ತಹಸೀಲ್ದಾರ್ ಭರತ್ ಆದೇಶ ಹೊರಡಿಸಿದ್ದಾರೆ.

ಇದೇ ವೇಳೆ, ತೀರ್ಥಹಳ್ಳಿ ತಾಲೂಕಿನಲ್ಲಿಯೂ ನಿರಂತರ ಮಳೆ ಸುರಿಯುತ್ತಿರುವ ಕಾರಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಕಾಲೇಜುಗಳಿಗೆ ಜುಲೈ 8ರಂದು ರಜೆ ಘೋಷಿಸಲಾಗಿದೆ ಎಂದು ತಹಸೀಲ್ದಾರ್ ರಂಜಿತ್ ಆದೇಶಿಸಿದ್ದಾರೆ.
ರಜೆ ಅವಧಿಯಿಂದ ಉಂಟಾಗುವ ಶೈಕ್ಷಣಿಕ ಪಠ್ಯ ನಷ್ಟವನ್ನು ಮುಂದಿನ ರಜೆಯ ದಿನಗಳಲ್ಲಿ ಸರಿದೂಗಿಸಿಕೊಳ್ಳುವಂತೆ ಸಂಬಂಧಿತ ಶಾಲೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ.
